ಭೂ ವಂದನ 23 ಭೂ ಸುಪೋಷಣ: ಜನಮನದಲ್ಲಾಗಲಿ ಜಾಗರಣ... Bhoo Vandana 23 
ಭೂ ವಂದನ - ನಂದಿನಿ ಲಕ್ಷ್ಮೀಕಾಂತ್​

ಭೂ ವಂದನ 23: ಭೂ ಸುಪೋಷಣ: ಜನಮನದಲ್ಲಾಗಲಿ ಜಾಗರಣ... Bhoo Vandana 23

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ನಮ್ಮ ಗುರಿ ಇದೊಂದೇ ಭೂಮಿಯನ್ನು ಸುಪೋಷಣೆ ಮಾಡಿ ಉಳಿಸಿಕೊಳ್ಳುವುದಾಗಿರಲಿ
  • ಭೂಮಿಯ ಆಧಾರಿಸಿ ಬದುಕಿರುವ ನಾವೆಲ್ಲರೂ ಈ ಕುರಿತು ದೃಢವಾದ ಹಜ್ಜೆಯನ್ನಿಡುವಲ್ಲಿ ನಮ್ಮ ಸ್ವಾರ್ಥವೂ ಅಡಗಿದೆ
  • ಆರೋಗ್ಯವೇ ಇಲ್ಲದೇ ಹೋದಲ್ಲಿ ಅದೆಷ್ಟು ಹಣ ಸ೦ಪಾದಿಸಿದರೂ ಏನು ಪ್ರಯೋಜನವಾದೀತು
Bhoo Vandana 23: ಬೆಂಗಳೂರಿನಲ್ಲಿ ದೊರೆವ ತರಕಾರಿಗಳು ವಿಷಕಾರಕ, ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಸುದ್ದಿ ಇತ್ತೀಚೆಗೆ ಎಲ್ಲ ಮಾಧ್ಯಮಗಳಲ್ಲೂ ಧ್ವನಿಮಾಡಿತ್ತು ನೆನಪು ಮಾಡಿಕೊಳ್ಳಿ. ಅಂದಹಾಗೆ ಅದೇನು ಹೊಸ ಸುದ್ದಿಯಲ್ಲವಲ್ಲ.  ವರ್ಷಕ್ಕೊಮ್ಮೆ ಬರುವ ಹಬ್ಬದಂತೆ ಈ ರೀತಿಯ ವರದಿಗಳೂ ಮೇಲೆದ್ದು, ಜನ ಹಾಗೂ ಮಾಧ್ಯಮ ಇಬ್ಬರೂ ಆ ವಿಷಯವನ್ನು ಸುದ್ದಿ ಹಳತಾದ೦ತೆ ಮರತೇ ಬಿಡುವುದು ಸ್ವಾಭಾವಿಕವಾಗಿದೆ.    
ಮಣ್ಣಿನ ಗುಣಗಳನ್ನು ತಿಳಿದು ಅದಕ್ಕೆ ತಕ್ಕ ಬೆಳೆಗಳನ್ನು ಆಯ್ಕೆ ಮಾಡುವ ವಿಧಾನವನ್ನೂ ಗ್ರಂಥ ಸೂಚಿಸುವುದರ ಹವಾಮಾನ ಆಧಾರಿತ ಕೃಷಿಯ ಮಹತ್ವವನ್ನು ವಿವರಿಸುತ್ತದೆ. ಅಷ್ಟೇ ಏಕೆ, ಇಂದಿನ ಯಾಂತ್ರಿಕ ಹಾಗೂ ರಾಸಾಯನಿಕ ಆಧಾರಿತ ಕೃಷಿಗೂ ‘ಕೃಷಿ ಪರಾಶರ’ ದಾರಿ ತೋರುತ್ತದೆ.   ಪಾರಂಪರಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಸಂಯೋಜಿಸುವ ಪ್ರಯತ್ನದಲ್ಲಿ ಈ ಗ್ರಂಥವು ಮಹತ್ವದ ಮಾರ್ಗದರ್ಶಕವಾಗಿದೆ. ಮಣ್ಣಿನ ಫಲವತ್ತತೆ ಕಾಪಾಡುವುದು, ನೀರಿನ ಸಂರಕ್ಷಣೆ, ಗೋಮಯದಂತಹ ನೈಸರ್ಗಿಕ ಗೊಬ್ಬರಗಳ ಬಳಕೆ ಇತ್ಯಾದಿ ವಿಧಾನಗಳನ್ನು ಶಿಫಾರಸು ಮಾಡುವ ಮೂಲಕ ಸುಸ್ಥಿರ ಕೃಷಿಯ ತತ್ತ್ವಗಳನ್ನು ಗ್ರಂಥ ಪ್ರತಿಪಾದಿಸುತ್ತದೆ. 
ಭಾರತೀಯ ಮೂಲ ಕೃಷಿ ಪದ್ಧತಿಗೆ ವಿರುದ್ಧವಾಗಿ 1960ರ ದಶಕದ ಸಮಯದಿಂದ ನಾವು ರಾಸಾಯನಿಕವಾಗಿ ತಯಾರಾದ ಗೊಬ್ಬರ, ರೋಗನಿರೋಧಕ ಮತ್ತು ಕೀಟನಾಶಕಗಳನ್ನು ಬಳಕೆ ಮಾಡುತ್ತ, ಪ್ರಾಚೀನ ಕೃಷಿ ಪದ್ಧತಿಯನ್ನು ಹಿಂದಿಕ್ಕಿದ್ದೇವೆ. 'ಅಧಿಕ ಬೆಳೆ – ಅಧಿಕ ಲಾಭ' ಘೋಷವಾಕ್ಯಕ್ಕೆ ನಮ್ಮ ಇಂದಿನ ಕೃಷಿ ಸಿಲುಕಿದೆ.   ಮಧ್ಯವರ್ತಿಗಳ ಲಾಭದ ಮನೋಭಾವಕ್ಕೆ ಸಿಲುಕಿದ ರೈತ, ಬೆಳೆದ ಬೆಳೆಯನ್ನು ದಾಸ್ತಾನು ಮಾಡಲು ಸೂಕ್ತ ವ್ಯವಸ್ಥೆ ಕಾಣದ ರೈತ, ತಾನು ಹೆಚ್ಚಾಗಿ ಬೆಳೆದ ಬೆಳೆಯನ್ನು ಸಣ್ಣ ಉದ್ಯಮವಾಗಿ ಪರಿವರ್ತಿಸುವತ್ತ ಸಫಲನಾಗದ ಇಂದಿನ ರೈತ, ಬೆವರು ಸುರಿಸಿ ಬೆಳೆ ಬೆಳೆದರೂ 'ಆತ್ಮಹತ್ಯೆಗೆ' ಬಲಿಯಾಗುತ್ತಿದ್ದಾನೆ ಅಲ್ಲವೇ?  ರೈತನಿಗೂ ಬೆಲೆಸಿಗದ, ಪರಿಸರವನ್ನೂ, ಜನರ ಆರೋಗ್ಯವನ್ನು ಹಾಳುಗೆಡುವ ಭೂ ಮಾತೆಯ ಕುರಿತು ಕಿಂಚಿತ್ತೂ ಕಾಳಜಿತೋರದ ಕೃಷಿ ಪದ್ಧತಿಯನ್ನು ಸುಧಾರಿಸಲು ಪ್ರಬಲ ಇಚ್ಛಾಶಕ್ತಿಯ ರಾಜಕಾರಣ ಬೇಕು. ಭಾರತೀಯ ಜೀವನ ಪದ್ಧತಿಯನ್ನು ಎಡ-ಬಲವೆಂದು ವಾದಿಸುವ ಮನೋಭಾವ ಬೆಳೆಸುವುದು ಆ ಕುರಿತು ವಿಶ್ಲೇಷಿಸುವುದು 'ಭೂವಂದನ'ದ ಕೆಲಸವಲ್ಲ. ಇಲ್ಲಿ ನಮಗಿರುವ ಒಂದೇ ಧರಣಿಯನ್ನು ಭರಣಿಯಾಗಿ ಸುಪೋಷಣವಾಗಿರಿಸಿಕೊಳ್ಳುವುದು ಹೇಗೆ ಎನ್ನುವತ್ತ ಮಾತ್ರ ನಮ್ಮ ಚಿಂತನ-ಮಂಥನ. ನಾವು ಸೇವಿಸುವ ಆಹಾರ/ತರಕಾರಿ ವಿಷಯುಕ್ತವಾದರೆ ಅದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದೆನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳೋಣ. ಆನಂತರ ಭೂಮಿಯನ್ನು ಸುಪೋಷಣಗೊಳಿಸುವತ್ತ ಚಿಂತಿಸೋಣ. 
ಹೊಲವನೂಳುವ ರೈತ ನಾವಾಗಿದ್ದರೆ ದೇಶೀಯ ಬೀಜಗಳ ಸಂರಕ್ಷಣೆ ಮತ್ತು ಸಂವರ್ಧನೆಯತ್ತ ನಮ್ಮ ಗಮನವಿರಲಿ. ಹಾಗೆಯೇ ನಮ್ಮ ಹೊಲದ ಬದುಗಳ ಸುತ್ತ ಭೂಮಿಯಲ್ಲಿ ಸತ್ವವನ್ನು ಹಿಡಿದಿಡುವ ಮರಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸುವುದು ಹೆಚ್ಚು ಉತ್ತಮ. ರಸಾಯನಿಕಗಳ ಬಳಕೆಗಿಂತ ಕೃಷಿವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಸರಕ್ಕೆ ಅನುಕೂಲಕರವಾದ, ಆಹಾರಕ್ಕೂ ಆರೋಗ್ಯಕ್ಕೂ ಉತ್ತಮವೆನಿಸುವ ಪರಿಸರ ಸ್ನೇಹಿ ಕೀಟನಾಶಕಗಳ ಬಳಕೆ ಮಾಡುವುದು ನಮ್ಮ ಮೊದಲ ಹೆಜ್ಜೆಯಾಗಲಿ. ಇನ್ನು ನದಿದಂಡೆಗಳಲ್ಲಿರುವ ಭೂ ಪ್ರದೇಶದಲ್ಲಿ ಉತ್ತುವಳಿ ನಡೆಸುವ ರೈತ ನಾವಾದರೆ, ಬೇಸಿಗೆಯಲ್ಲಿ ನದಿಯ ಪಾತ್ರವನ್ನು ಒತ್ತುವರಿ ಮಾಡದೇ,  ಮಳೆಗಾಲದಲ್ಲಿ ನೀರನ್ನು ಹಾಗೂ ವಿದ್ಯುತ್ತನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ  ಪರಿಸರಕ್ಕೆ ಪೂರಕವಾದ ಕೆಲಸದತ್ತದ ಎರಡನೇ ಹೆಜ್ಜೆಯನ್ನಿಡೋಣ.  
ಇದು ಸುಮಾರು ನಾಲ್ಕು ದಶಕಗಳ ಹಿoದಿನ ಮಾತು. ತೀರ್ಥಹಳ್ಳಿಯಲ್ಲಿ ಪುರುಷೋತ್ತಮರೆಂಬ ಪ್ರಗತಿಪರ ರೈತರು ತಮ್ಮ ಒಂದೆಕೆರೆ ಭೂಮಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಪ್ರಗತಿಪರ ಕೃಷಿಗೆ ಆ ಭಾಗದಲ್ಲಿ ಬುನಾದಿ ಹಾಕಿಕೊಟ್ಟರು. ಅವರ ತೋಟ ಕೃಷಿಕರಿಗೆ ಕಲಿಕೆಯ ಕೇಂದ್ರವಾಗಿತ್ತೆನ್ನುವುದನ್ನು ನೆನಪಿಸಿಕೊಳ್ಳುತ್ತಾ, ಇಂದು ಅಂತಹ ಅನೇಕ ಪ್ರಗತಿ ಪರ ಕೃಷಿಕರು ನಮ್ಮ ನಡುವಿದ್ದಾರೆ ಎನ್ನುವುದು ಹರುಷದ ಸಂಗತಿ. ಅಂತಹವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬೇಕಾದ್ದು ನಮ್ಮ ಇಂದಿನ ಅವಶ್ಯಕತೆ. ಕೃಷಿಗೆ ಪೂರಕವಾದ ಯಂತ್ರೋಪಕರಣಗಳ ಬಳಕೆಯಲ್ಲಿ ಪರಿಸರ ಸ್ನೇಹಿಯಾಗುವ, ಹಸ್ತ ಚಾಲಿತ ಅಥವಾ ಪಶು ಚಾಲಿತ ಯಂತ್ರಗಳನ್ನು ಬಳಸಿದರೆ ಪರಿಸರಕ್ಕೆ ಉಪಯೋಗವಾದೀತೇ ಎಂದೂ ಕೃಷಿಕನಾದವ ಯೋಚಿಸುತ್ತಾ ಪರಿಸರ ಸ್ನೇಹಿಯಾಗುವತ್ತ ಮುಂದಿನ ಹೆಜ್ಜೆಗಳನ್ನಿಡಬಹುದು. ದೇಸೀ ಗೋವಿನ ತಳಿಗಳನ್ನು ಸಂರಕ್ಷಿಸಿದರೂ ರಾಸಾಯನಿಕ ರಹಿತ ಕೃಷಿಗೆ ಸ್ವಾಭಾವಿಕ ದಾರಿಯಾಗುತ್ತದೆ. 
ಇನ್ನು ಕೃಷಿಮಾಡಲು ಭೂಮಿಯಿಲ್ಲದ ನಮ್ಮಂತಹ ಅನೇಕರು ನಾವು ಸೇವಿಸುವ ಆಹಾರ ವಿಷಯುಕ್ತವಾಗಲು ರೈತ ತಾನು ಬೆಳೆಯುವ ಫಸಲಿಗೆ ಆತ ಸಿಂಪಡಿಸುವ ರಾಸಾಯನಿಕಗಳ ಜೊತೆಗೆ, ಆತ ಹನಿಸುವ ನೀರೂ, ಭೂಮಿಯ ಫಲವತ್ತತೆಯೂ ಕಾರಣವಾಗುತ್ತದೆ ಅಲ್ಲವೇ?  ಹನಿಸುವ ನೀರನ್ನು ಕಲುಷಿತಗೊಳಿಸುವುದರಲ್ಲಿ ನಮ್ಮ ಪಾತ್ರವೇ ಮುಖ್ಯವಾಗಿರುವುದರಿಂದ, ತರಕಾರಿ ಅಥವಾ ನಾವು ಸೇವಿಸುವ ಆಹಾರ ವಿಷಯುಕ್ತವಾಗಿರಲು ನಾವೂ 'ಮಾಡಿದ್ದುಣ್ಣೋ ಮಹರಾಯ'ವೆಂಬಂತೆ ನೇರವಾಗಿಯೇ ಕಾರಣರಾಗುತ್ತಿದ್ದೇವೆ. ಹೀಗಾಗಿ  ಪರಿಸರಕ್ಕೆ ಬೇಡದ ಪ್ಲಾಸ್ಟಿಕ್, ಥರ್ಮಕೋಲ್, ಪಿಒಪಿಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವ ಮೂಲಕ ಭೂ ಸುಪೋಷಣೆಯತ್ತ ಹೆಜ್ಜೆಯಿರಿಸೋಣ. ಸಾವಯವ ಕೃಷಿಗೆ ರೈತರು ಒಲಿದಂತೆ ಸಾವಯವ ಉತ್ಪನ್ನ ಹಾಗೂ ದೇಸೀ ವಸ್ತುಗಳ ಖರೀದಿ ಹಾಗೂ ಬಳಕೆ ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದು. 
ನಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಾಗ ನಮ್ಮ ಗುರಿ ಇದೊಂದೇ ಭೂಮಿಯನ್ನು ಸುಪೋಷಣೆ ಮಾಡಿ ಉಳಿಸಿಕೊಳ್ಳುವುದಾಗಿರಲಿ. ಭೂಮಿಯ ಆಧಾರಿಸಿ ಬದುಕಿರುವ ನಾವೆಲ್ಲರೂ ಈ ಕುರಿತು ದೃಢವಾದ ಹಜ್ಜೆಯನ್ನಿಡುವಲ್ಲಿ ನಮ್ಮ ಸ್ವಾರ್ಥವೂ ಅಡಗಿದೆ. ಆರೋಗ್ಯವೇ ಇಲ್ಲದೇ ಹೋದಲ್ಲಿ ಅದೆಷ್ಟು ಹಣ ಸ೦ಪಾದಿಸಿದರೂ ಏನು ಪ್ರಯೋಜನವಾದೀತು!  ಕೇವಲ ಆರೋಗ್ಯವಲ್ಲ ನಮ್ಮ ಆತಂಕಕಾರಿ ಪ್ರವೃತ್ತಿ ಹಾಗೂ ನಿರ್ಲಕ್ಷ ಧೋರಣೆಯಿಂದ ಭಾರತದ ಮಣ್ಣಿನ ಆರೋಗ್ಯದ ಸ್ಥಿತಿ ಕುರಿತು ನಡೆಸಿರುವ ಅಧ್ಯಯನಗಳು ದೇಶದ ಒಟ್ಟು ಭೂಭಾಗದ ಸುಮಾರು 30 ಶೇಕಡಾ ಭಾಗದಲ್ಲಿ “ಸಣ್ಣ ಪ್ರಮಾಣದ” ಮಣ್ಣಿನ ಕೊಚ್ಚುಹೊರಗು (soil erosion) ಹಾಗೂ ಸುಮಾರು 3 ಶೇಕಡಾ ಪ್ರದೇಶವು ಕೃಷಿಗೆ ಅತ್ಯಂತ ಅಗತ್ಯವಾದ ಮೇಲ್ಮಣ್ಣಿನ (topsoil) ಅಪಾಯಕಾರಿ ಕುಸಿತವನ್ನೆದುರಿಸುತ್ತಿದೆ ಎನ್ನುವುದನ್ನು ಹೇಳುತ್ತದೆ. ಸಸ್ಯಗಳ ಬೆಳವಣಿಗೆಗೆ, ಉತ್ಪತ್ತಿಗೆ, ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಸಂಗ್ರಹಿಸುವ ಕಾರ್ಯವನ್ನು ಯಶಸ್ವಿಯಾಗಿಡುವ, ಮಣ್ಣಿನ ಮೇಲ್ಮೆ ಪದರದ ಕುಸಿತ ಕುರಿತು ನಾವು ಎಚ್ಚರಾಗಬೇಕಾದ್ದು ಅತ್ಯವಶ್ಯಕ.
ಭೂ ಸುಪೋಷಣೆಯ ಕುರಿತು ಜಾಗೃತಿ ಕಾರ್ಯವೊಂದನ್ನು ಸ್ವಯಂ ಸೇವಾ ಸಂಸ್ಥೆ ಅದಾಗಲೇ ಕೈಗೆತ್ತಿಕೊಂಡಿದೆ. ನಾವೂ ಅಂತಹ ಕಾರ್ಯಕ್ರಮಗಳಿಗೆ ಕೈ ಜೋಡಿಸೋಣ. ಜಾಗೃತರಾಗಿರೋಣ. ನಮ್ಮ ಗ್ರಾಮ, ಊರು, ಪಟ್ಟಣ, ಬಡಾವಣೆಗಳಲ್ಲಿ ಭೂಮಿಯ ಸಂರಕ್ಷಣೆಯನ್ನು 'ಮಾತಾ ಭೂಮಿ: ಪುತ್ರೋಹಂ ಪೃಥಿವ್ಯಾ:' ಎನ್ನುವ ಹಾಗೆ ಭೂ ಮಾತೆಯನ್ನು ಸಂರಕ್ಷಿಸಿಕೊಳ್ಳೋಣ. ನಾವು ಸೇವಿಸುವ ಆಹಾರವನ್ನು ನಮಗೆ ನೀಡುವ ವಂದನೀಯ ಭೂಮಿಯನ್ನು, ನಾವು ಸಂರಕ್ಷಿಸಿದರೆ, ಹರಿವ ನೀರು 'ಸುಜಲಾಂ' ಆಗಿ ಬೆಳೆಯುವ ಪೈರು 'ಸುಫಲಾಂ'ವಾದೀತು. ಯೋಚಿಸಿ ನೋಡಿ!  

ಲೇಖಕರ ಪರಿಚಯ

ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸಂಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.